ರಾಮಚಂದ್ರ ಶುಕ್ಲ
1884 - 1941. ಹಿಂದೀ ಸಾಹಿತ್ಯದ ಹೆಸರಾಂತ ವಿಮರ್ಶಕ, ನಿಬಂಧಕಾರ, ಸಾಹಿತ್ಯ ಚರಿತ್ರೆಯ ನಿರ್ಮಾತೃ, ಕೋಶಕಾರ, ಭಾಷಾಂತರಕಾರ, ಕತೆಗಾರ ಮತ್ತು ಕವಿ. ಹುಟ್ಟಿದ್ದು ಬಸ್ತೀ ಜಿಲ್ಲೆ ಅಗೌನಾ ಎಂಬ ಹಳ್ಳಿಯಲ್ಲಿ. ಇವರು ಮೀರಜಾಪುರದ ಲಂಡನ್ ವಿಷನ್ ಸ್ಕೂಲಿನಲ್ಲಿ (1901) ಓದಿ ಅಲ್ಲಿಯ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಕೌಟುಂಬಿಕ ಪರಿಸ್ಥಿತಿ ಪ್ರತಿಕೂಲವಾಗಿದ್ದರಿಂದ ಶಿಕ್ಷಣ ಮುಂದುವರಿಸಲಿಲ್ಲ. 1903 ರಿಂದ 1908ರ ತನಕ 'ಆನಂದ ಕಾದಂಬಿನೀ` ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. 1904 ರಿಂದ 1908ರ ತನಕ ಲಂಡನ್ ಮಿಷನ್ ಸ್ಕೂಲಿನಲ್ಲಿ ಡ್ರಾಯಿಂಗ್ ಮಾಸ್ತರಾಗಿದ್ದರು. 1908ರಲ್ಲಿ ಕಾಶೀ ನಾಗರಿಕ ಹಿಂದೀ ಪ್ರಚಾರಿಣೀ ಸಭೆಯ ವತಿಯಿಂದ ಸಿದ್ಧವಾಗುತ್ತಿದ್ದ `ಹಿಂದೀ ಶಬ್ದಸಾಗರ`ದ ಸಂಪಾದಕರಾಗಿ ನಿಯುಕ್ತರಾದರು. ಶ್ಯಾಮಸುಂದರದಾಸರ ಪ್ರಕಾರ `ಹಿಂದೀ ಶಬ್ದಸಾಗರ`ದ ಯಶಸ್ಸಿಗೆ ಬಹುಮಟ್ಟಿಗೆ ರಾಮಚಂದ್ರ ಶುಕ್ಲರೇ ಕಾರಣರು. 1919ರಲ್ಲಿ ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಿಂದೀ ಪ್ರಾಧ್ಯಾಪಕರಾಗಿ ನೇಮಿಸಲ್ಪಟ್ಟರು. 1937 ರಿಂದ 1941ರ ತನಕ ಆ ವಿಭಾಗದ ಮುಖ್ಯಸ್ಥರಾಗಿದ್ದರು.

ಶುಕ್ಲ ಪ್ರಮುಖ ಕೃತಿಗಳೂ: ಆದರ್ಶ ಜೀವನ್ (1914), ವಿಶ್ವಪ್ರಪಂಚ್ (1920 - 21, ಬುದ್ಧ ಚರಿತ್ (1922), ಜಾಯಸೀ ಗ್ರಂಥಾವಲೀ (1924), ಹಿಂದೀ ಸಾಹಿತ್ಯ ಕಾ ಇತಿಹಾಸ್ (1929), ಹಿಂದೀ ಸಾಹಿತ್ಯ ಕಾ ಇತಿಹಾಸ್ (ಸಂಶೋಧಿತ 1940), ಗೋಸ್ವಾಮಿ ತುಲಸೀದಾಸ್ ಸಂಸ್ಕರಣ, 1933), ಚಿಂತಾಮಣಿ - ಪ್ರಥಮ ಭಾಗ (1939), ಸೂರ್‍ದಾಸ್ (1943) ಚಿಂತಾಮಣಿ - ದ್ವಿತೀಯ ಭಾಗ (1945). ರಸಮೀಮಾಂಸಾ (1949).

ಶುಕ್ಲರ ಪ್ರಕಾರ ರಸ ಕಾವ್ಯದ ಆತ್ಮ. ಕಾವ್ಯದ ಪರಮಪ್ರಯೋಜನ ಆನಂದವಲ್ಲ; ಲೋಕಕಲ್ಯಾಣವೇ ಕಾವ್ಯದ ಪರಮಪ್ರಯೋಜನ ಎಂಬ ದೃಷ್ಟಿ. ಶುಕ್ಲರ ಎಲ್ಲ ಮೌಕಿಕ ವಿಚಾರಗಳೂ ಲೋಕ ಜೀವನದ ಮೂರ್ತ ಆರ್ದಶಗಳಿಂದ ಬೆಸೆಯಲ್ಪಟ್ಟಿವೆ. ಕಾವ್ಯಶಾಸ್ತ್ರದಲ್ಲಿ ಮೌಲಿಕ ಚಿಂತನೆ ನಡೆಸಿ ಆಚಾರ್ಯ ಪದವಿಗೇರಿಸಿದ್ದಾರೆ.

ಜಾಯಸೀ, ಸೂರ ಮತ್ತು ತುಳಸೀದಾಸರ ಬಗ್ಗೆ `ವ್ಯಾವಹಾರಿಕ ವಿಮರ್ಶೆ` ನಡೆಸಿದ್ದಾರೆ. ತಾವು ಬರೆದ `ಹಿಂದೀ ಸಾಹಿತ್ಯ ಚರಿತ್ರೆ` ಯಲ್ಲಿ ಇವರು ಕೇವಲ ಶುಷ್ಕ ಇತಿಹಾಸಕಾರರಾಗಿಲ್ಲ; ಸಹೃದಯ ಸಮೀಕ್ಷಕರಾಗಿ ಕಂಗೊಳಿಸುತ್ತಾರೆ. `ಚಿಂತಾಮಣಿ` ಯಲ್ಲಿ ಶುಕ್ಲರ ಮನೋವೈe್ಞÁನಿಕ ನಿಂಬಂಧಗಳು ಸಂಕಲಿತವಾಗಿವೆ. 

ಇವರು ಬರೆದ `ಹಿಂದೀ ಸಾಹಿತ್ಯ ಚರಿತ್ರೆ` ಹಿಂದಿಯ ಗೌರವ ಗ್ರಂಥ. ಅಭಿನವಗುಪ್ತನ ತರುವಾಯ ಭಾರತೀಯ ಕಾವ್ಯಮೀಮಾಂಸೆಯ ರಥ ಒಂದು ನಿಲುಗಡೆಗೆ ಅದನ್ನು ಕೊಂಚ ದೂರವಾದರೂ ತೆಗೆದುಕೊಂಡು ಹೋಗುವ ಸಾಹಸಗೈದವರಲ್ಲಿ ಇವರೂ ಒಬ್ಬರು. ಇವರ ಗಂಭೀರ ಚಿಂತನಪ್ರಧಾನ ಸಮಾಲೋಚನೆ ಹಿಂದಿಯಲ್ಲಿ ಒಂದು ಯುಗವನ್ನೇ ಸಾರಿತು. ಅದೇ `ಶುಕ್ಲಯುಗ`. ಶುಕ್ಲರು ಸೈದ್ಧಾಂತಿಕ, ಐತಿಹಾಸಿಕ ಮತ್ತು ಪ್ರಾಯೋಗಿಕ ಈ ಮೂರೂ ವಿಮರ್ಶೆಯ ಪ್ರಕಾರಗಳಲ್ಲಿ ಸವ್ಯಸಾಚಿ. ಸೈದ್ಧಾಂತಿಕ ವಿಮರ್ಶೆ ಹಿಂದಿಯಲ್ಲಿ ಶುಕ್ಲರನ್ನು ಅಜರಾಮರಗೊಳಿಸಿದೆ. ರಸಮೀಮಾಂಸೆಯನ್ನು ಇವರು ಆಧುನಿಕ ದೃಷ್ಟಿಕೋನದಿಂದ ಬೆಳೆಸಿ ಅದರ ಆನಂದವಾದಕ್ಕೆ ಮನೋವೈe್ಞÁನಿಕ ಮತ್ತು ಸಾಮಾಜಿಕ ನೆಲೆಗಟ್ಟನ್ನು ನೀಡಲು ಯತ್ನಿಸಿದ್ದಾರೆ. ರಸದೆಶೆಯಲ್ಲಿ ಇವರು ಅನೇಕ ಭೇದಗಳನ್ನು ತೋರಿಸಿ ಅದನ್ನು ಸಾಧನಾವಸ್ಥೆ, ಸಿದ್ಧಾವಸ್ಥೆ, ಸ್ಮøತರೂಪವಿಧಾನ, ಕಲ್ಪಿತ ರೂಪವಿಧಾನ ಮೊದಲಾದವುಗಳ ದೃಷ್ಟಿಯಿಂದ ಒರೆಗಲ್ಲಿಗೆ ಹಚ್ಚಿದ್ದಾರೆ. ಕಾವ್ಯದಲ್ಲಿ ವ್ಯಕ್ತವಾಗುವ ಭಾವ ಸಮಾಜದ ಆದರ್ಶಗಳಿಗೆ ಹತ್ತಿರವಾದಷ್ಟೂ ಅವುಗಳ ಸಾಧಾರಣೀಕರಣ ಅಷ್ಟೇ ಶೀಘ್ರ ಎಂದು ಹೇಳಿ ರಸಸಿದ್ಧಾಂತದ ವ್ಯಕ್ತಿವಾದೀ ಪ್ರವೃತ್ತಿಯನ್ನು ಸಾಮಾಜಿಕತೆಯತ್ತ ಒಯ್ದಿದ್ದಾರೆ.
			 (ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ